ಗ್ರಹವರ್ಮನ್
-	ಕನೌಜಿನ ಮೌಖರಿ ಸಂತತಿಯ ಅವಂತಿವರ್ಮನ ಮಗ ಮತ್ತು ಉತ್ತರಾಧಿಕಾರಿ. ಗ್ರಹವವರ್ಮನಿಗೆ ಸಂಬಂಧಿಸಿದ ಮಾಹಿತಿ ಬಾಣನ ಹರ್ಷ ಚರಿತ ಗ್ರಂಥದಿಂದ ಮಾತ್ರ ಲಭ್ಯವಾಗಿದೆ. ಇವನು ಸಿಂಹಾಸನವನ್ನೇರಿದ ತರುವಾಯ ಆಗ ತಾನೆ ಪ್ರಾಬಲ್ಯಕ್ಕೆ ಬಂದಿದ್ದ ಸ್ಥಾಣೇಶ್ವರದ ವರ್ಧನ ಸಂತತಿಯ ಮಹಾರಾಜಾದಿ ರಾಜಪ್ರಭಾಕರವರ್ಧನನ ಏಕಮಾತ್ರ ಪುತ್ರಿಯಾದ ರಾಜ್ಯಶ್ರೀಯನ್ನು ವರಿಸಲು ಇಚ್ಛಿಸಿದ. ತನ್ನ ಇಂಗಿತವನ್ನು ಪ್ರಭಾಕರವರ್ಧನನಿಗೆ ದೂತರ ಮುಖಾಂತರ ತಿಳಿಸಿದ. ಪ್ರಭಾಕರವರ್ಧನ ಈ ಸಂಬಂಧಕ್ಕೆ ಒಪ್ಪಿ ತನ್ನ ಕುಮಾರಿಯನ್ನು ಗ್ರಹವರ್ಮನಿಗೆ ಕೊಟ್ಟು, ವಿವಾಹ ಮಾಡಿಕೊಟ್ಟ. ಇದು 604 ರಲ್ಲಿ ನಡೆದಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಮೌಖರಿ ಮತ್ತು ವರ್ಧನ ಸಂತತಿಗಳು ಒಂದುಗೂಡಿದ್ದನ್ನು ಕಂಡು ಬಂಗಾಳದ ಶಶಾಂಕನೂ ಮಾಳವದ ದೇವಗುಪ್ತನೂ ಒಟ್ಟಾಗಿ ಸಂಚು ನಡೆಸಿದರು. 606 ರಲ್ಲಿ ಪ್ರಭಾಕರವರ್ಧನ ಗತಿಸಿದ. ಅತನ ರಾಣಿ ಯಶೋಮತಿ ಅಗ್ನಿ ಪ್ರವೇಶ ಮಡಿದಳು. ಆ ಸಮಯದಲ್ಲಿ ಶಶಾಂಕನ ನೆರವಿನಿಂದ ದೇವಗುಪ್ತ ಕನೌಜನ್ನು ಮುತ್ತಿದ. ಈ ಮುತ್ತಿಗೆ ಬಹುಶಃ 606 ರಲ್ಲಿ ನಡೆದಿರಬೇಕು. ಗ್ರಹವರ್ಮ ಯುದ್ಧದಲ್ಲಿ ಸೋತು ಮರಣ ಹೊಂದಿದ. ಅವನ ರಾಣಿಯಾದ ರಾಜ್ಯಶ್ರೀ ಕನೌಜಿನಲ್ಲೇ ಬಂಧನಕ್ಕೊಳಗಾದಳು. ಪ್ರಭಾಕರವರ್ಧನನ ಮಗ ರಾಜ್ಯವರ್ಧನ ಅನಂತರ ಗ್ರಹವರ್ಮನ ವೈರಿಗಳನ್ನು ಸೋಲಿಸಿದನಾದರೂ ಅವರ ಸಂಚಿನಿಂದ ಕೊಲೆಯಾದ. ಗ್ರಹವರ್ಮನ ಅಂತ್ಯದೊಂದಿಗೆ ಮೌಖರಿ ಮನೆತನ ಕೊನೆಗೊಂಡಿತು.							(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ